2nd PUC Kannada Chapter 13

2nd PUC Kannada Question and Answer – Muttisikondavanu

Looking for 2nd PUC Kannada textbook answers? You can download Chapter 13: Muttisikondavanu Questions and Answers PDF, Notes, and Summary here. 2nd PUC Kannada Gadyabhaga solutions follow the Karnataka State Board Syllabus, making it easier for students to revise and score higher in exams.

Karnataka 2nd PUC Kannada Textbook Answers—Reflections Chapter 13

Muttisikondavanu Questions and Answers, Notes, and Summary

2nd PUC Kannada Gadyabhaga Chapter 13

ಮುಟ್ಟಿಸಿಕೊಂಡವನು

Muttisikondavanu

2nd PUC Kannada Chapter 13 Muttisikondavanu
Scroll Down to Download Muttisikondavanu PDF
I. ಒಂದು ಅಂಕದ ಪ್ರಶ್ನೆಗಳು:

Question 1.
ಬಸಲಿಂಗನ ಹೆಂಡತಿಯ ಹೆಸರೇನು?
Answer:
ಬಸಲಿಂಗನ ಹೆಂಡತಿಯ ಹೆಸರು ಸಿದ್ದಿಂಗಿ.

Question 2.
ಬಸಲಿಂಗನಿಗೆ ಕಾಣಿಸಿಕೊಂಡ ತೊಂದರೆ ಯಾವುದು?
Answer:
ಬಸಲಿಂಗನಿಗೆ ಕಣ್ಣಿನಲ್ಲಿ ನೋವು ಕಾಣಿಸಿಕೊಂಡಿತು.

Question 3.
ಬಸಲಿಂಗನಿಗೆ ಮೊದಲು ಯಾವ ಕಣ್ಣಿನಲ್ಲಿ ನೋವು ಆರಂಭವಾಯಿತು?
Answer:
ಬಸಲಿಂಗನಿಗೆ ಮೊದಲು ಎಡಗಣ್ಣಿನಲ್ಲಿ ನೋವು ಆರಂಭವಾಯಿತು.

Question 4.
‘ಮುಟ್ಟಿಸಿಕೊಂಡವನು’ ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರೇನು?
Answer:
‘ಮುಟ್ಟಿಸಿಕೊಂಡವನು’ ಕತೆಯಲ್ಲಿ ಬರುವ ಸರ್ಕಾರಿ ಆಸ್ಪತ್ರೆಯ ವೈದ್ಯರ ಹೆಸರು ಡಾ॥ ತಿಮ್ಮಪ್ಪ.

Question 5.
ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಲ್ಲಿದ್ದ ಅಭಿಪ್ರಾಯವೇನು?
Answer:
ಸರ್ಕಾರಿ ಆಸ್ಪತ್ರೆಯ ಬಗ್ಗೆ ಬಸಲಿಂಗನಿಗಿದ್ದ ಅಭಿಪ್ರಾಯವೆಂದರೆ “ಸರ್ಕಾರಿ ಆಸ್ಪತ್ರೆ ಎಂದರೆ ದಿಕ್ಕು ದಿವಾಳಿ ಇಲ್ಲದವರು ಹೋಗುವ ಜಾಗ” ಎಂಬುದು.

Question 6.
ಬಸಲಿಂಗನು ಡಾ. ತಿಮ್ಮಪ್ಪನಿಗೆ ಏನೆಂದು ಸುಳ್ಳು ಹೇಳಿದನು?
Answer:
ಬಸಲಿಂಗನು ಡಾ| ತಿಮ್ಮಪ್ಪನಿಗೆ “ತಾನು ತಲೆಗೆ ನೀರು ಸೋಂಕಿಸಿದರೂ ಸೋಂಕಿಸಿಯೇ ಇಲ್ಲವೆಂದು” ಸುಳ್ಳು ಹೇಳಿದನು.

Question 7.
ಬಸಲಿಂಗನು ವೈದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ಯಾರು?
Answer:
ಬಸಲಿಂಗನು ವೈದ್ಯರಿಗಾಗಿ ಅಲೆದಾಗ ಜೊತೆಗಿದ್ದ ರಾಜಕಾರಣಿ ಲಿಂಗಾಯತ ಜಾತಿಯ ರುದ್ರಪ್ಪ,

Question 8.
ಬಸಲಿಂಗನ ಕಾಯಿಲೆ ದೇಹದ ಮಟ್ಟದಿಂದ ಯಾವ ಸ್ತರವನ್ನು ತಲುಪತೊಡಗಿತ್ತು?
Answer:
ಬಸಲಿಂಗನ ಕಾಯಿಲೆ ದೇಹದ ಮಟ್ಟದಿಂದ ಮಾನಸಿಕ ಸ್ತರವನ್ನು ತಲುಪತೊಡಗಿತ್ತು.

Question 9.
ಡಾ॥ ತಿಮ್ಮಪ್ಪ ಬಸಲಿಂಗನಿಗೆ ಯಾವ ವೈದ್ಯರನ್ನು ಕಾಣಬೇಕೆಂದು ಸೂಚಿಸಿದರು?
Answer:
ಡಾ॥ ತಿಮ್ಮಪ್ಪ ಬಸಲಿಂಗನಿಗೆ ಡಾ| ಚಂದ್ರಪ್ಪ ಎಂಬ ವೈದ್ಯರನ್ನು ಕಾಣಬೇಕೆಂದು ಸೂಚಿಸಿದರು.

Question 10.
ಕೊನೆಗೆ ಬಸಲಿಂಗ ಯಾವುದರಿಂದ ಮುಕ್ತನಾಗಿದ್ದ?
Answer:
ಕೊನೆಗೆ ಬಸಲಿಂಗ ಸುಳ್ಳುಗಳಿಂದ ಮುಕ್ತನಾಗಿದ್ದ.

II. ಎರಡುಮೂರು ವಾಕ್ಯಗಳಲ್ಲಿ ಉತ್ತರಿಸಿ:

Question 1.
ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ ಯಾಕೆ?
Answer:
ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ ಏಕೆಂದರೆ ಅದು ಕೃಷಿ ಸಮಯವಾಗಿತ್ತು. ಒಂದು ವೇಳೆ ಬಸಲಿಂಗ ಉಳುಮೆ ಮಾಡುವುದನ್ನು ನಾಲ್ಕು ದಿನ ತಡಮಾಡಿದರೂ ನೇಗಿಲಿನ ತುದಿ ನೆಲದಲ್ಲಿ ನಾಟುವುದು ಕಷ್ಟವಾಗುತ್ತಿತ್ತು. ಅದೂ ಅಲ್ಲದೆ ಆತನ ಎರಡೂ ಎತ್ತುಗಳು ಒಂದಕ್ಕಿಂತ ಒಂದು ಸೋಮಾರಿಗಳಾಗಿದ್ದವು. ಅವುಗಳನ್ನು ಆತ ಸಾಟ ಮಾಡಲು ಆಲೋಚಿಸುತ್ತಿದ್ದ. ಅಲ್ಲದೆ ಮಗುವಿನ ಕೆಮ್ಮಿನ ಸಮಸ್ಯೆ, ಜೊತೆಯಲ್ಲಿ ಆತನ ಎಡಗಣ್ಣಿನಲ್ಲಿ ನೋವು ಕಾಣಿಸಿಕೊಂಡಿತ್ತು. ಈ ಎಲ್ಲಾ ಸವಾಲುಗಳನ್ನು ಆತ ಎದುರಿಸಬೇಕಾಗಿತ್ತು.

Question 2.
ಹೆಂಡ್ತಿ ಸಿದ್ದಿಂಗಿ ಏನು ಹೇಳುತ್ತಲೇ ಇದ್ದಳು?
Answer:
ಬಸಲಿಂಗನಿಗೆ ಗೇಯಬೇಕಾದ ಅನಿವಾರ್ಯತೆ ಒಂದೆಡೆಯಾದರೆ ಇನ್ನೊಂದೆಡೆ ಅವನು ಹೊಂದಿದ್ದ ಎರಡು ಎತ್ತುಗಳು ಸೋಮಾರಿಗಳಾಗಿದ್ದವು. ಇದರ ಜೊತೆಯಲ್ಲಿ ಆತನ ಹೆಂಡತಿ ಸಿದ್ದಿಂಗಿ ಮಗುವಿಗೆ ಮೈಯಲ್ಲಿ ಸರಿಯಿಲ್ಲ, ಏನು ಮಾಡಿದರೂ ಕೆಮ್ಮು ಕಡಿಮೆಯಾಗಲಿಲ್ಲ, ಶಿವನೂರು ಸ್ವಾಮಿಗಳಿಗೆ ತೋರಿಸಬೇಕು ಎಂದು ಹೇಳುತ್ತಲೇ ಇದ್ದಳು.

Question 3.
ಬಸಲಿಂಗನಿಗೆ ತನ್ನ ಕಷ್ಟದ ಮುಂದೆ ಯಾವುದು ಗೌಣವಾಗಿ ಕಾಣತೊಡಗಿದವು?
Answer:
ಬಸಲಿಂಗನಿಗೆ ಕಾಣಿಸಿಕೊಂಡ ಕಣ್ಣಿನ ಸಮಸ್ಯೆ ಆತನನ್ನು ತೀವ್ರತರದಲ್ಲಿ ಹಿಂಸೆಗೆ ಒಳಪಡಿಸುತ್ತಿತ್ತು. ಅದಕ್ಕೆ ಸರಿಯಾಗಿ ಆತನ ಹೆಂಡತಿಯು ಆತನ ನೋವನ್ನು ಅರಿಯದಾದಳು. ಇದರಿಂದ ಬಸಲಿಂಗನಲ್ಲಿ ತೀವ್ರವಾದ ಆಕ್ರೋಶ ಮತ್ತು ಅಸಹಾಯಕತೆ ಕಾಣಿಸಿಕೊಂಡಿತು. ನೋವನ್ನು ಸುಮ್ಮನೆ ವಿವರಿಸದೆಕೆಲವರಲ್ಲಿ ತನ್ನ ಇತರ ಕಷ್ಟಗಳನ್ನೂ ತೋಡಿಕೊಂಡ. ಅವನಿಗೆ ಆತನ ಕಷ್ಟದ ಮುಂದೆ ಉಳದಿರುವ ನೆಲ. ಮಗುವಿನ ಕಾಯಿಲೆ ಎಲ್ಲವೂ ಗೌಣವಾಗಿ ಕಾಣತೊಡಗಿದವು.

Question 4.
ಕಣ್ಣನ್ನು ಪರೀಕ್ಷಿಸಿದ ಡಾ|ತಿಮ್ಮಪ್ಪ ಬಸಲಿಂಗನಿಗೆ ಏನೆಂದು ಹೇಳಿದರು?
Answer:
ಬಸಲಿಂಗ ತನಗೆ ಕಾಣಿಸಿದ ಎಡಗಣ್ಣಿನ ನೋವಿಗೆ ಎಲ್ಲೂ ಸರಿಯಾದ ಚಿಕಿತ್ಸೆ ಸಿಗದೇ ಇದ್ದಾಗ ಡಾ||ತಿಮ್ಮಪ್ಪನವರ ಬಳಿಗೆ ಹೋಗುತ್ತಾನೆ. ತನ್ನ ಎಲ್ಲಾ ಕಷ್ಟಗಳನ್ನು ಹೇಳಿಕೊಳ್ಳುತ್ತಾನೆ. ಸೂಟಿಯಾದ (ಕೈ ಚಳಕ) ಬೆರಳುಗಳ ವಿಶ್ವಾಸ ತುಂಬಿದ ಮಾತುಗಳ ಡಾಕ್ಟರು ತಿಮ್ಮಪ್ಪ ಅವನನ್ನು ಪರೀಕ್ಷಿಸಿದರು. ಬಸಲಿಂಗನ ದೃಷ್ಟಿಯ ಅಳತೆ, ಸ್ಪಷ್ಟತೆಯನ್ನು ನೋಡಿದರು. ನೋವಿನ ನಿಖರ ಕಾರಣಕ್ಕಾಗಿ ಹುಡುಕಿದರು. ಕೊನೆಗೆ ಹೇಳಿದರು. “ನಿನ್ನ ಕಣ್ಣು ಸರಿ ಹೋಗುತ್ತೆ. ಆದರೆ ಆಪರೇಷನ್ ಆಗಬೇಕು ಪರವಾಗಿಲ್ಲವಾ? ಎಂದರು.

Question 5.
ಸಿದ್ದಿಂಗಿ ಏಕೆ ರಾದ್ಧಾಂತ ಮಾಡಿದಳು?
Answer:
ಬಸಲಿಂಗ ಡಾಕ್ಟರ್ ತಿಮ್ಮಪ್ಪನವರಲ್ಲಿ ಚಿಕಿತ್ಸೆಯನ್ನು ಪಡೆಯಲು ಮುಂದಾಗುತ್ತಾನೆ. ಆತನಿಗೆ ತಿಮ್ಮಪ್ಪ ಹೊಲೆಯ ಜಾತಿಗೆ ಸೇರಿದವರೆಂಬುದು ತಿಳಿದಿರುವುದಿಲ್ಲ. ಆದರೆ ಬಸಲಿಂಗನ ಹೆಂಡತಿ ಸಿದ್ದಿಂಗಿಗೆ ಡಾ॥ ತಿಮ್ಮಪ್ಪ ಹೊಲೆಯ ಜಾತಿಗೆ ಸೇರಿದವರೆಂಬುದು ತಿಳಿಯುತ್ತದೆ. ಒಬ್ಬ ಹೊಲೆಯ ಜಾತಿಯವನನ್ನು ಮುಟ್ಟುವುದು ಮೈಲಿಗೆ ಎಂಬ ಜಾತೀಯ ಭಾವನೆ ಹೊಂದಿದ ಆಕೆ ಈ ವಿಷಯ ತಿಳಿದಾಗ ರಾದ್ಧಾಂತವನ್ನೇ ಎಬ್ಬಿಸುತ್ತಾಳೆ.

Question 6.
ಅನ್ಯ ಡಾಕ್ಟರುಗಳು ಬಸಲಿಂಗನ ಕಾಯಿಲೆ ಬಗ್ಗೆ ಏನೆಂದು ಪ್ರತಿಕ್ರಿಯಿಸಿದರು?
Answer:
ಬಸಲಿಂಗ ತನ್ನ ಎಡಗಣ್ಣಿನ ನೋವು ತಡೆಯದಾದಾಗ ಆತ ಮರಳಿ ಡಾ. ತಿಮ್ಮಪ್ಪನಲ್ಲಿಗೆ ಹೋಗುತ್ತಾನೆ. ಆದರೆ ಅವರು ಮರಳಿ ಆಪರೇಷನ್ ಮಾಡಲು ಸಾಧ್ಯವಿಲ್ಲವೆಂದು ಔಷಧಿ ಬರೆದು ಕೊಡುತ್ತಾರೆ. ಇದರಿಂದ ರೋಷಗೊಂಡ ಬಸಲಿಂಗ ತನ್ನ ಉಡಾಫೆತನದಿಂದ ಲಿಂಗಾಯತ ರಾಜಕಾರಣಿ ರುದ್ರಪ್ಪನನ್ನು ಕರೆದುಕೊಂಡು ಬೇರೆ ವೈದ್ಯರ ಬಳಿಗೆ ಹೋದ. ಇವನನ್ನು ಪರೀಕ್ಷಿಸಿದ ಕೆಲವು ಡಾಕ್ಟರುಗಳು “ಇದಕ್ಕೆ ಆಪರೇಷನ್ನೇ ಬೇಕಿಲ್ಲ. ಆ ಡಾಕ್ಟರ್ ತಿಮ್ಮಪ್ಪನಿಗೆ ಬುದ್ದಿ ಇಲ್ಲ. ಅದಕ್ಕೆ ಅಪರೇಷನ್ ಮಾಡಿದ್ದಾರೆ ಎಂದರು. ಔಷಧಿ ನೀಡಿ ಹಿತವಚನ ಕೊಟ್ಟರು.

Question 7.
ಡಾ| ಚಂದ್ರಪ್ಪ ಬಸಲಿಂಗನಿಗೆ ಡಾ|ತಿಮ್ಮಪ್ಪನ ಬಗ್ಗೆ ಕೊಟ್ಟ ಅಭಿಪ್ರಾಯವೇನು?
Answer:
ಡಾ। ತಿಮ್ಮಪ್ಪನವರ ಆದೇಶದ ಮೇರೆಗೆ ಡಾ| ಚಂದ್ರಪ್ಪನವರ ಬಳಿಗೆ ಬಂದ ಬಸಲಿಂಗನನ್ನು ಪರೀಕ್ಷಿಸಿದ ಡಾ| ಚಂದ್ರಪ್ಪನವರು ಬಸಲಿಂಗನ ಎಡಗಣ್ಣಿನ ಪೂರ್ತಿ ಚರಿತ್ರೆಯನ್ನು ತಿಳಿದು ಹೀಗೆ ಹೇಳಿದರು. “ಡಾ| ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಡಾಕ್ಟರು ತಿಮ್ಮಪ್ಪ.ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ” ಎಂದರು.

Question 8.
ಕೊನೆಯಲ್ಲಿ ಬಸಲಿಂಗನಿಗೆ ಏನೆಂದು ನಿಶ್ಚಿತವಾಗತೊಡಗಿತ್ತು?
Answer:
ಡಾ। ತಿಮ್ಮಪ್ಪನವರ ಆದೇಶದ ಮೇರೆಗೆ ಬಸಲಿಂಗ ಡಾ| ಚಂದ್ರಪ್ಪನವರಲ್ಲಿಗೆ ಚಿಕಿತ್ಸೆಗಾಗಿ ಬರುತ್ತಾನೆ. ಆಗ ಚಂದ್ರಪ್ಪನವರು ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತದೆ ಎನ್ನುತ್ತಾರೆ. ಆಗ ರುದ್ರಪ್ಪನವರೊಂದಿಗೆ ಹೊರಗೆ ಬಂದ ಬಸಲಿಂಗ ತಲೆಯ ಮೇಲೆ ಕೈ ಹೊತ್ತು ಕೂತು ಯಾರು ಮಾತಾಡಿಸಿದರೂ ಮಾತಾಡಲೇ ಇಲ್ಲ. ಹೆಂಡತಿಯ ಮಾತೂ ಸಹ ಕಿವಿಗೆ ಬೀಳದಾಯಿತು ಬಲಗಣ್ಣಿನ ದೃಷ್ಟಿಯು ಬರುಬರುತ್ತ ಮಂದವಾಗುತ್ತಿರುವುದು ಆತನಿಗೆ ಗೊತ್ತಿತ್ತು. ಈ ನಡುವೆ ಬಸಲಿಂಗನಿಗೆ ತನ್ನ ಉಡಾಫೆ, ಸುಳ್ಳು, ಜಾತಿ, ಮಠದ ಗುರು- ಯಾರೂ ತನ್ನ ಕಣ್ಣು ಉಳಿಸುವುದಿಲ್ಲ ಎಂಬುದು ನಿಶ್ಚಿತವಾಗತೊಡಗಿತ್ತು.

III. ಸಂದರ್ಭ ಸಹಿತ ವಿವರಿಸಿ:

Question 1.
ಅಪರೇಷನ್ ಆಗಬೇಕು, ಪರವಾಗಿಲ್ಲವಾ?

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಪಿ.ಲಂಕೇಶ್‌ರವರು ಬರೆದ ‘ಮುಟ್ಟಿಸಿಕೊಂಡವನು’ ಎಂಬ ಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ : ಡಾ. ತಿಮ್ಮಪ್ಪ ಬಸಲಿಂಗನಿಗೆ ಪ್ರಶ್ನಿಸುವ ಸಂದರ್ಭ ಇದಾಗಿದೆ.
ವಿವರಣೆ: ಬಸಲಿಂಗನಿಗೆ ಅದು ಪುರುಸೊತ್ತಿಲ್ಲದ ಕಾಲ. ದುಡಿಮೆಯ ಸಮಯವಾಗಿತ್ತು. ದುಡಿಯುವುದನ್ನು ನಾಲ್ಕು ದಿನ ತಡಮಾಡಿದರೂ ನೇಗಿಲಿನ ತುದಿ ನೆಲದಲ್ಲಿ ನಾಟುವುದು ಕಷ್ಟವಾಗಿತ್ತು. ದುಡಿಮೆಯ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಆತನ ಎರಡೂ ಎತ್ತುಗಳು ಸೋಮಾರಿಗಳಾಗಿದ್ದವು. ಮಗು ಕಾಯಿಲೆಯನ್ನು ಹೊಂದಿತ್ತು. ಅದಕ್ಕಿಂತ ಮುಖ್ಯವಾಗಿ ಬಸಲಿಂಗ ಎಡಗಣ್ಣಿನ ಬೇನೆಯಿಂದ ಬಳಲುತ್ತಿದ್ದ, ಎಲ್ಲ ವೈದ್ಯರನ್ನು ಭೇಟಿಮಾಡಿ ಸರಿಯಾದ ಪರಿಹಾರ ಸಿಗದೇ ಇದ್ದಾಗ ಯಾರೋ ಒಬ್ಬರು ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ| ತಿಮ್ಮಪ್ಪರನ್ನು ಭೇಟಿ ಮಾಡಲು ಹೇಳಿದರು. ಬಸಲಿಂಗನ ದೃಷ್ಟಿಯ ಆಳತೆ, ಸ್ಪಷ್ಟತೆಯನ್ನು ನೋಡಿ ನೋವಿನ ಕಾರಣಕ್ಕಾಗಿ ಹುಡುಕಿದ ತಿಮ್ಮಪ್ಪನವರು ಕೊನೆಗೆ ಈ ಮೇಲಿನಂತೆ ಹೇಳುತ್ತಾರೆ.

Question 2.
ನೀರು ಬಿದ್ದರೆ ಕಣ್ಣು ಹೋಗುವ ಅಪಾಯ ಇದೆ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಪಿ.ಲಂಕೇಶ್‌ ರವರು ಬರೆದ ‘ಮುಟ್ಟಿಸಿಕೊಂಡವನು’ ಎಂಬ ಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಡಾಳಿ ತಿಮ್ಮಪ್ಪನವರು ಬಸಲಿಂಗನಿಗೆ ಹೇಳಿದ ಮಾತಿದು.
ವಿವರಣೆ: ನಗರದ ವೈದ್ಯರಿಂದ ತನ್ನ ಕಣ್ಣುನೋವಿಗೆ ಏನೂ ಪರಿಹಾರ ದೊರಕದೇ ಇದ್ದಾಗ ಬಸಲಿಂಗ ಯಾರೋ ಒಬ್ಬರು ನೀಡಿದ ಸಲಹೆಯ ಮೇರೆಗೆ ಡಾ|ತಿಮ್ಮಪ್ಪನವರಲ್ಲಿ ಚಿಕಿತ್ಸೆಗಾಗಿ ಬರುತ್ತಾನೆ. ತಿಮ್ಮಪ್ಪನವರ ಮಾತಿನ ರೀತಿ, ಪರೀಕ್ಷೆಯ ಕ್ರಮಗಳು ಆತನಿಗೆ ನೋವು ಸರಿಹೋಗುವ ಭರವಸೆಯೂ ಸಿಗುತ್ತದೆ. ಮರುದಿನ ತಿಮ್ಮಪ್ಪನವರು ಬಸಲಿಂಗನನ್ನು ಆಪರೇಷನ್‌ಗೆ ಸಿದ್ಧಗೊಳಿಸಿ ಕೆಲವೇ ನಿಮಿಷಗಳಲ್ಲಿ ಆಪರೇಷನ್ ಮುಗಿಸಿದರು. ಅವನ ಕೈ ಹಿಡಿದುಕೊಂಡು ಇದು ಸೂಕ್ಷ್ಮವಾದ ಶಸ್ತ್ರಚಿಕಿತ್ಸೆ, ನೀನು ಎರಡು ವಾರ ತಲೆಗೆ ನೀರನ್ನು ಸೋಂಕಿಸಬಾರದು ಎನ್ನುತ್ತಾ ಈ ಮೇಲಿನಂತೆ ಹೇಳುತ್ತಾರೆ.

Question 3.
ಬಸಲಿಂಗಪ್ಪ, ನೀನು ತುಂಬಾ ಒಳ್ಳೆಯವನು.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಪಿ.ಲಂಕೇಶ್ ರವರು ಬರೆದ ‘ಮುಟ್ಟಿಸಿಕೊಂಡವನು’ ಎಂಬ ಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಬಸಲಿಂಗನಿಗೆ ಡಾಳಿ ತಿಮ್ಮಪ್ಪ ಹೇಳುತ್ತಾರೆ.
ವಿವರಣೆ: ಡಾ| ತಿಮ್ಮಪ್ಪ ಹೊಲೆಯ ಜಾತಿಗೆ ಸೇರಿದವರೆಂದು ತಿಳಿದ ಸಿದ್ದಿಂಗಿ ಗಂಡನ ಎದುರು ರಾದ್ಧಾಂತವನ್ನೇ ಎಬ್ಬಿಸುತ್ತಾಳೆ. ಆಗ ಬೆರಗಾದ ಬಸಲಿಂಗ ಡಾ| ತಿಮ್ಮಪ್ಪ ನನ್ನನ್ನು ಮುಟ್ಟುವ ಮುನ್ನ ತಮ್ಮ ಜಾತಿಯ ಬಗ್ಗೆ ಹೇಳಿದ್ದರೆ ಒಳ್ಳೆಯದಿತ್ತೆಂದು ಅಂದುಕೊಳ್ಳುತ್ತಾನೆ. ಅಲ್ಲದೆ ಈ ವಿಚಾರವನ್ನು ಯಾರ ಬಳಿಯೂ ಹೇಳಬಾರದು ಎಂದು ತೀರ್ಮಾನಿಸಿದ ಇಬ್ಬರೂ, ಡಾ| ತಿಮ್ಮಪ್ಪನವರು ಹೇಳಿದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಲ್ಲಿ ವಿಫಲರಾದರು.ಇದರಿಂದ ಬಸಲಿಂಗ ಮತ್ತೆ ಕಣ್ಣಿನ ಬೇನೆಗೆ ಒಳಗಾಗುತ್ತಾನೆ. ಆಗ ತಿಮ್ಮಪ್ಪನವರ ಬಳಿಗೆ ಹೋಗದೇ ಉಳಿದ ಎಲ್ಲಾ ವೈದ್ಯರ ಬಳಿಗೆ ಹೋಗುತ್ತಾನೆ. ಏನೂ ಪರಿಹಾರದೊರಕದೇ ಹೋದಾಗ ಮತ್ತೆ ತಿಮ್ಮಪ್ಪನವರ ಬಳಿಗೆ ಬರುತ್ತಾನೆ. ಬಸಲಿಂಗನನ್ನು ಪ್ರೀತಿಯಿಂದ ಬರಮಾಡಿಕೊಂಡ ಡಾ| ತಿಮ್ಮಪ್ಪ ಅತನಿಗೆ ಪ್ರಶ್ನೆ ಕೇಳತೊಡಗಿದರು. ತಿಮ್ಮಪ್ಪನವರಪ್ರಶ್ನೆಯಿಂದ ತಬ್ಬಿಬ್ಬಾದ ಬಸಲಿಂಗನನ್ನು ಗಮನಿಸಿದ ವೈದ್ಯರು ಈ ಮೇಲಿನಂತೆ ಹೇಳುತ್ತಾರೆ.

Question 4.
ಅವರು ನನ್ನಷ್ಟೇ ಒಳ್ಳೆಯ ಡಾಕ್ಟರು, ಏನೂ ತಪ್ಪು ತಿಳಿಯಬೇಡ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಪಿ.ಲಂಕೇಶ್‌ರವರು ಬರೆದ ‘ಮುಟ್ಟಿಸಿಕೊಂಡವನು’ ಎಂಬ ಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಮರಳಿ ತನ್ನ ಬಳಿಗೆ ಚಿಕಿತ್ಸೆಗಾಗಿ ಬಂದ ಬಸಲಿಂಗನಿಗೆ ಡಾ| ತಿಮ್ಮಪ್ಪ ಈ ಮಾತನ್ನು ಹೇಳುತ್ತಾರೆ.
ವಿವರಣೆ: ತಿಮ್ಮಪ್ಪನವರ ಪ್ರೀತಿಯ ಮಾತುಗಳಿಗೆ ಮಣಿದ ಬಸಲಿಂಗ ಆದದ್ದೆಲ್ಲವನ್ನೂ ಹೇಳಿದ. ಅಲ್ಲದೆ ತನಗೆ ಎರಡನೇ ಬಾರಿ ಆಪರೇಷನ್ ಮಾಡಿಬಿಡಿ ಎಂಬುದಾಗಿ ತನ್ನ ಬೇಡಿಕೆಯನ್ನು ಮುಂದಿಟ್ಟ ಆದರೆ ತಿಮ್ಮಪ್ಪ ಆಪರೇಷನ್ ನಿರಾಕರಿಸಿ ಔಷದಿ, ಮಾತ್ರೆ ಕೊಟ್ಟು ಕಳುಹಿಸಿದರು. ಇದರಿಂದ ಸಿಟ್ಟುಗೊಂಡ ಬಸಲಿಂಗ ತನ್ನ ಉಡಾಫೆತನದಿಂದ ತಿಮ್ಮಪ್ಪನ ವಿರುದ್ಧ ಇತರರು ಕೆಟ್ಟ ಮಾತುಗಳನ್ನು ಆಡುವ ಹಾಗೆ ಮಾಡಿದ.

ಅಲ್ಲದೆ ತನ್ನ ಲಿಂಗಾಯತ ಜಾತಿಯ ರಾಜಕಾರಣಿ ರುದ್ರಪ್ಪನನ್ನು ಜೊತೆಗೆ ಕರೆದುಕೊಂಡು ಚಿಕಿತ್ಸೆಗಾಗಿ ವೈದ್ಯರ ಬಳಿಗೆ ಹೋದ. ಆದರೆ ಯಾರಿಂದಲೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಪುನಃ ತಿಮ್ಮಪ್ಪನವರ ಎದುರಿಗೆ ಬಂದಾಗ ಆತನನ್ನು ಗಮನಿಸಿದ ತಿಮ್ಮಪ್ಪನವರು ಬಸಲಿಂಗಪ್ಪ ನಾನು ನಿನ್ನನ್ನು ಮುಟ್ಟಿದ್ದು ಡಾಕ್ಟರಾಗಿ ಮಾತ್ರ. ಈ ಮುಟ್ಟುವಿಕೆ ನಾನು ಊಹಿಸದೇ ಇದ್ದದನ್ನು ಮಾಡಿದೆ ಎಂದು ಹೇಳುತ್ತಾ ಡಾ| ಚಂದ್ರಪ್ಪನವರನ್ನು ಕಾಣುವಂತೆ ಸಲಹೆ ನೀಡಿ ಈ ಮೇಲಿನಂತೆ ಹೇಳುತ್ತಾರೆ.

Question 5.
ಈ ಮುಟ್ಟುವಿಕೆ ನಾನು ಊಹಿಸದೆ ಇದ್ದದ್ದನ್ನು ಮಾಡಿದೆ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಪಿ.ಲಂಕೇಶ್‌ರವರು ಬರೆದ ‘ಮುಟ್ಟಿಸಿಕೊಂಡವನು’ ಎಂಬ ಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಡಾ| ತಿಮ್ಮಪ್ಪ ಬಸಲಿಂಗನಲ್ಲಿ ಹೇಳುತ್ತಾರೆ.
ವಿವರಣೆ: ಎರಡನೇ ಬಾರಿ ಆಪರೇಷನ್ ಮಾಡಲಿಕ್ಕೆ ಡಾ||ತಿಮ್ಮಪ್ಪನವರು ನಿರಾಕರಿಸಿದ್ದರಿಂದ ಬಸಲಿಂಗ ಸಿಟ್ಟುಗೊಳ್ಳುತ್ತಾನೆ. ತನ್ನ ಜಾತಿಯನ್ನು ಕೆಡಿಸಿದ ತಿಮ್ಮಪ್ಪ ತನ್ನ ಬಗ್ಗೆ ನಿರ್ಲಕ್ಷ್ಯ ಬೆಳೆಸಿಕೊಂಡಿದ್ದಾರೆಂದು ಕೋಪಿಸಿಕೊಂಡು ಅವರ ಬಗ್ಗೆ ಅಪಪ್ರಚಾರಕ್ಕೆ ಮುಂದಾಗುತ್ತಾನೆ. ಆದರೆ ಈ ನಡುವೆ ಆತನ ಕಣ್ಣು ಬೇನೆ ಇನ್ನಷ್ಟು ತೀವ್ರವಾಗುತ್ತದೆ. ಆದರೆ ಆತ ತಿಮ್ಮಪ್ಪನವರನ್ನು ಹೊರತುಪಡಿಸಿ ಉಳಿದ ವೈದ್ಯರಿಗೆ ತೋರಿಸುತ್ತಾನೆ. ಆದರೆ ಪರಿಹಾರ ಶೂನ್ಯ.

ಕೊನೆಗೆ ತನ್ನ ಉಡಾಫೆಯ ಶೈಲಿಯಲ್ಲೇ ತಿಮ್ಮಪ್ಪನವರಲ್ಲಿಗೆ ಚಿಕಿತ್ಸೆಗಾಗಿ ಬರುತ್ತಾನೆ. ಆಗ ಬಸಲಿಂಗನಲ್ಲಿ ಆದ ಬದಲಾವಣೆಯನ್ನು ಗಮನಿಸಿದ ತಿಮ್ಮಪ್ಪನವರು ನೋವಿನಿಂದಲೇ ಹೀಗೆ ಹೇಳುತ್ತಾರೆ. ಬಸಲಿಂಗ ನಾನು ನಿನ್ನನ್ನು ಮುಟ್ಟಿದ್ದು ಡಾಕ್ಟರಾಗಿ ಆದರೆ ನಿನ್ನಂಥ ಮುಗ್ಧ ಮನುಷ್ಯನಲ್ಲಿ ಕೂಡ ಈ ಮುಟ್ಟುವಿಕೆ ನಾನು ಊಹಿಸದೇ ಇದ್ದದನ್ನು ಮಾಡಿದೆ ಎಂದು ಈ ಮೇಲಿನಂತೆ ಹೇಳುತ್ತಾರೆ.

Question 6.
ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ.

Answer:
ಆಯ್ಕೆ: ಈ ಮೇಲಿನ ವಾಕ್ಯವನ್ನು ಪಿ. ಲಂಕೇಶ್‌ರವರು ಬರೆದ ‘ಮುಟ್ಟಿಸಿಕೊಂಡವನು’ ಎಂಬ ಪಾಠದಿಂದ ಆಯ್ದುಕೊಳ್ಳಲಾಗಿದೆ.
ಸಂದರ್ಭ: ಈ ಮಾತನ್ನು ಡಾಕ್ಟರ್ ಚಂದ್ರಪ್ಪನವರು ಚಿಕಿತ್ಸೆಗಾಗಿ ತನ್ನ ಬಳಿಗೆ ಬಂದ ಬಸಲಿಂಗನಿಗೆ ಹೇಳುತ್ತಾರೆ.
ವಿವರಣೆ: ಬಸಲಿಂಗನ ಕಣ್ಣು ಬೇನೆಗೆ ಎಲ್ಲೂ ಚಿಕಿತ್ಸೆ ದೊರೆಯದಾದಾಗ ಆತ ನಾಲ್ಕನೇ ಹಾಗೂ ಕೊನೆಯ ಬಾರಿ ಎಂಬಂತೆ ತನ್ನ ಉಡಾಫೆಯ ಶೈಲಿಯಲ್ಲಿಯೇ ಡಾ|| ತಿಮ್ಮಪ್ಪನವರನ್ನು ಭೇಟಿ ಮಾಡುತ್ತಾನೆ. ಇವನನ್ನು ಗಮನಿಸಿದ ತಿಮ್ಮಪ್ಪನವರು ಬಸಲಿಂಗನಲ್ಲಿ ಈ ಮುಟ್ಟುವಿಕೆ ನಾನು ಊಹಿಸದೇ ಇದ್ದದ್ದನ್ನು ಮಾಡಿದೆ ಎನ್ನುತ್ತಾರೆ. ತನ್ನಷ್ಟೇ ಒಳ್ಳೆಯ ವೈದ್ಯರಾದ ಡಾ| ಚಂದ್ರಪ್ಪನವರಲ್ಲಿಗೆ ಕಳುಹಿಸುತ್ತಾರೆ. ಬಸಲಿಂಗನ ಎಡಗಣ್ಣಿನ ಪೂರ್ಣ ಚರಿತ್ರೆಯನ್ನು ತಿಳಿದ ಚಂದ್ರಪ್ಪನವರು ‘ಡಾ। ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ನಮ್ಮ ವೈದ್ಯಲೋಕ ಬಲ್ಲ ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಡಾಕ್ಟರು ತಿಮ್ಮಪ್ಪ, ಈ ಕಣ್ಣಿನ ರೋಗ ಅವರ ವಲಯಕ್ಕೆ ಸೇರಿದ್ದು’ ಎನ್ನುತ್ತಾ ಮೇಲಿನಂತೆ ಹೇಳುತ್ತಾರೆ.

IV. ನಾಲ್ಕು ಅಂಕಗಳ ಪ್ರಶ್ನೆಗಳು :

Question 1.
ಬಸಲಿಂಗ ಎದುರಿಸುತ್ತಿದ್ದ ಸಮಸ್ಯೆಗಳು ಯಾವುವು?

Answer:
ಮುಟ್ಟಿಸಿಕೊಂಡವನು ಕತೆಯಲ್ಲಿ ಬರುವ ಬಸಲಿಂಗ ಒಬ್ಬ ಲಿಂಗಾಯತ ಜಾತಿಯ ಶ್ರಮಿಕ. ಕಷ್ಟಪಟ್ಟು ದುಡಿಯುವ ಮುಖಾಂತರವಾಗಿ ತನ್ನ ಸಂಸಾರದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದ. ಅದು ಬಸಲಿಂಗನಿಗೆ ದುಡಿಮೆಯ ಕಾಲವಾಗಿದ್ದರಿಂದ ಸ್ವಲ್ಪವೂ ಪುರುಸೊತ್ತು ಇರಲಿಲ್ಲ. ಒಂದು ವೇಳೆಬಸಲಿಂಗ ಉಳುಮೆ ಮಾಡುವುದನ್ನು ನಾಲ್ಕು ದಿನ ತಡಮಾಡಿದರೂ ನೇಗಿಲಿನ ತುದಿ ನೆಲದಲ್ಲಿ ನಾಟುವುದು ಕಷ್ಟವಾಗುತ್ತಿತ್ತು. ಹಾಗಾಗಿ ಬೇಗ ಬೇಗ ಉಳುಮೆ ಮಾಡುವ ಅನಿವಾರ್ಯತೆ ಅವನಿಗಿತ್ತು.

ಆದರೆ ಬಸಲಿಂಗ ಆ ಸಮಯದಲ್ಲಿ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ, ಬಸಲಿಂಗನ ಸಮಸ್ಯೆಗಳಲ್ಲಿ ಮೊದಲನೆಯದು ಆತನ ಸೋಮಾರಿಗಳಾದ ಎರಡು ಎತ್ತುಗಳು, ಒಂದಕ್ಕಿಂತ ಇನ್ನೊಂದು ದುಡಿಮೆಯಲ್ಲಿ ಹಿಂದಿತ್ತು. ಒಂದು ನೊಗ ಇನ್ನೊಡನೆ ಮಲಗಿ ಬಿಡುತ್ತದೆ. ಎಷ್ಟು ಹೊಡೆದರೂ ಏಳುವುದಿಲ್ಲ. ಇನ್ನೊಂದು ಕೂಡ ತನ್ನ ಸಹೋದ್ಯೋಗಿಯಂತೆಯೇ ಆಗಿ ಬಿಡುವ ಸೂಚನೆಗಳಿವೆ. ಮಲಗಿರುವ ಒಂದು ಎತ್ತು ಒಂದು ಏಟು ಕೊಟ್ರೊಡನೆ ಏಳುತ್ತದೆ. ಇನ್ನೊಂದು ಜೊತೆಗಾರ ವಿಳುವುದನ್ನೇ ಕಾದು ಕೆಲಸವಿಲ್ಲದ ಬಗ್ಗೆ ಖುಷಿಗೊಳ್ಳುವಂತೆ ಕಂಡುಬರುತ್ತದೆ. ಇದರಿಂದ ಬೇಸರಗೊಂಡ ಬಸಲಿಂಗ ಈ ಎರಡೂ ಎತ್ತುಗಳನ್ನು ಯಾರಾದರೊಬ್ಬರಿಗೆ ಸಾಟಿಯಲ್ಲಿ ಕೊಟ್ಟು ಹೊಸ ಎತ್ತುಗಳನ್ನು ಹೊಂಚಿಕೊಳ್ಳುವ ಯೋಚನೆ ಮಾಡುತ್ತಿದ್ದ. ಆದರೆ ಈ ಎರಡು ಎತ್ತುಗಳನ್ನು ಮಾರುವುದು ಆತನಿಗೆ ಒಂದು ಸವಾಲಾಗಿತ್ತು. ಯಾಕೆಂದರೆ ಈ ಎತ್ತುಗಳ ಬಗ್ಗೆ ಒಳ್ಳೆಯದನ್ನು ಹೇಳಲು ಲೆಕ್ಕ ಹಾಕಿದಂತೆಲ್ಲ ಅವನ ತಲೆ ಬಿಸಿಯಾಗುತ್ತಿತ್ತು.

ಅವನು ಎದುರಿಸುತ್ತಿದ್ದ ಎರಡನೇ ಸಮಸ್ಯೆಯೆಂದರೆ, ಅವನ ಮಗುವಿಗೆ ಮೈಯಲ್ಲಿ ಸರಿಯಿಲ್ಲ. ಶಿವನೂರು ಸ್ವಾಮಿಗಳಿಗೆ ತೋರಿಸಬೇಕೆಂದು ಹೆಂಡತಿ ಸಿದ್ದಿಂಗಿ ಹೇಳುತ್ತಲೇ ಇದ್ದಾಳೆ. ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಅವನ ಮಗು ಅವನಿಂದ ದೂರವಾಗುವ ಸಂಭವವಿತ್ತು.

ಮೂರನೆಯ ಮತ್ತು ಮುಖ್ಯವಾದ ಸಮಸ್ಯೆಯೆಂದರೆ ಬಸಲಿಂಗನ ಎಡಗಣ್ಣಿನಲ್ಲಿ ಕಾಣಿಸಿಕೊಂಡ ನೋವು. ಇದು ದಿನದಿಂದ ದಿನಕ್ಕೆ ವ್ಯಾಪಿಸಿ ಕುಗ್ಗುವಂತೆ ಮಾಡಿತು. ಈ ಎಲ್ಲಾ ಸಮಸ್ಯೆಗಳು ಮೇಲಿಂದ ಮೇಲೆ ಬಸಲಿಂಗನನ್ನು ಕಾಡುತ್ತಿದ್ದವು.

Question 2.
ಕಣ್ಣುನೋವು ಶುರುವಾದ ಆರಂಭದಲ್ಲಿ ಬಸಲಿಂಗ ಪಡೆದುಕೊಂಡ ಚಿಕಿತ್ಸೆ ಯಾವ ರೀತಿಯದು?

Answer:
ಮುಟ್ಟಿಸಿಕೊಂಡವನು ಕತೆಯಲ್ಲಿ ಬರುವ ಬಸಲಿಂಗ ಆರಂಭದಲ್ಲಿಯೇ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ. ಅದು ದುಡಿಮೆಯ ಕಾಲವಾಗಿತ್ತು. ಆದರೆ ಆತನ ಎತ್ತುಗಳು ಸೋಮಾರಿಗಳಾಗಿದ್ದವು. ಬಸಲಿಂಗನ ಮಗು ಕೆಮ್ಮಿನಿಂದ ಬಳಲುತ್ತಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಬಸಲಿಂಗನ ಎಡಗಣ್ಣಲ್ಲಿ ನೋವು ಕಾಣಿಸಿಕೊಂಡಿತು.

ಆರಂಭದಲ್ಲಿ ಬಸಲಿಂಗ ತನಗೆ ಕಾಣಿಸಿಕೊಂಡ ಕಣ್ಣು ಬೇನೆಯನ್ನು ಅಷ್ಟೊಂದು ದೀರ್ಘವಾಗಿ ಪರಿಗಣಿಸಲಿಲ್ಲ. ಇದೊಂದು ಸಾಮಾನ್ಯ ಸಮಸ್ಯೆ ಎಂದುಕೊಂಡ ನೋವು ಕಾಣಿಸಿಕೊಂಡರೂ ಆತನ ಕಣ್ಣು ಕೆಂಪಾಗಿರಲಿಲ್ಲ. ಆದರೆ ನೋವು ಇನ್ನಷ್ಟು ತೀವ್ರವಾಗಿ ಎಡಗಣ್ಣು ಮಂದವಾದಂತಾದಾಗ ಬಸಲಿಂಗನಿಗೆ ಹೆದರಿಕೆ ಶುರುವಾಯಿತು. ಅಲ್ಲದೆ ಎಡಗಣ್ಣಿನಲ್ಲಿ ಇರುವ ನೋವು ಬಲಗಣ್ಣಿನಲ್ಲಿ ಇರಲಿಲ್ಲ.

ನೋವು ಇನ್ನಷ್ಟು ಜಾಸ್ತಿಯಾಗ ತೊಡಗಿದಾಗ ಆತ ನಗರದ ತನ್ನ ಮಾಮೂಲಿ ವೈದ್ಯರಿಗೆ ತೋರಿಸಿದ. ವೈದ್ಯರು ನೋವಿನ ವಿವರಗಳನ್ನೆಲ್ಲ ಕೇಳಿ ರೆಪ್ಪೆ ಆಗಲಿಸಿ ನೋಡಿದರು. ಅವರಿಗೆ ಏನೂ ಅರ್ಥವಾಗದಿದ್ದರೂ ಬಸಲಿಂಗನಿಗೆ ಧೈರ್ಯ ತುಂಬಲು ಒಳ್ಕೊಳ್ಳೆಯ ಮಾತನಾಡಿದರು. ತಮ್ಮ ವೈದ್ಯಕೀಯ ಪವಾಡಗಳನ್ನು ವಿವರಿಸಿದರು.

ಹಚ್ಚಿಕೊಳ್ಳಲು ಒಂದು ಲೇಹ್ಯ ಕೊಟ್ಟರು. ಸ್ವಲ್ಪ ಸಮಾಧಾನದಿಂದ ಮನೆಗೆ ಬಂದ ಬಸಲಿಂಗ ಹಲವು ದಿನ ಲೇಹ್ಯ ಹಚ್ಚಿಕೊಂಡು ವೈದ್ಯರು ಹೇಳಿದಂತೆ ಬಟ್ಟೆಯ ಕಾವು, ಉಪ್ಪಿನಕಾವು ಕೊಟ್ಟುಕೊಂಡ. ಆದರೆ ಈ ರೀತಿಯಾದ ಯಾವ ಚಿಕಿತ್ಸೆಯೂ ಆತನ ನೋವನ್ನು ಕಡಿಮೆ ಮಾಡಲಿಲ್ಲ. ಬದಲಾಗಿ ಕಣ್ಣಿನ ಮಂದಸ್ಥಿತಿ ಹೆಚ್ಚಾಗುತ್ತಾ ಹೋಯಿತು. ಅಲ್ಲದೆ ತನ್ನ ನೋವಿನ ತೀವ್ರತೆಯನ್ನು ಹೆಂಡತಿ ಸಿದ್ದಿಂಗಿಯಲ್ಲಿ ಹೇಳಿಕೊಂಡಾಗ ಆಕೆಯೂ ಕೂಡ ಸ್ಪಂದಿಸದೆ ಎಲ್ಲ ಅವನ ಭ್ರಮೆ ಎನ್ನುವಂತೆ ಮಾತನಾಡಿದಳು. ಕೊನೆಯಲ್ಲಿ ಎಲ್ಲೂ ಒಳ್ಳೆಯ ಚಿಕಿತ್ಸೆ ಸಿಗದಾಗ ಬಸಲಿಂಗನಿಗೆ ಯಾರೋ ಒಬ್ಬರು ಸರ್ಕಾರಿ ವೈದ್ಯ ಡಾ|ತಿಮ್ಮಪ್ಪನವರನ್ನು ಕಾಣಲು ಹೇಳಿದರು.ಅದರಂತೆ ಆ ವೈದ್ಯರನ್ನು ಕಾಣಲು ಮುಂದಾದ.

Question 3.
ಬಸಲಿಂಗ ಡಾ| ತಿಮ್ಮಪ್ಪನವರ ಸೂಚನೆಗಳನ್ನು ಪಾಲಿಸದೆ ಇರಲು ಕಾರಣವೇನು?

Answer:
ಆರಂಭದಲ್ಲಿ ಬಸಲಿಂಗನಿಗೆ ಕಾಣಿಸಿಕೊಂಡ ಕಣ್ಣು ಬೇನೆಗೆ ಎಲ್ಲಿಯೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ನಗರದಲ್ಲಿರುವ ಖಾಸಗಿ ಆಸ್ಪತ್ರೆಯ ವೈದ್ಯರುಗಳು ಇವನ ನೋವನ್ನು ಸರಿಪಡಿಸುವಲ್ಲಿ ವಿಫಲರಾದರು.ಇದರಿಂದ ಬಸಲಿಂಗನ ಕಣ್ಣಿನ ನೋವು ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿತು. ತನ್ನನೋವಿನ ಮುಂದೆ ಉಳಿದಿರುವ ನೆಲ, ಮಗುವಿನ ಕಾಯಿಲೆ ಎಲ್ಲವೂ ಅವನಿಗೆ ಗೌಣವಾಗಿ ಕಾಣತೊಡಗಿದವು. ಕೊನೆಗೆ ಯಾರೋ ಒಬ್ಬರು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ತಿಮ್ಮಪ್ಪನವರಿಗೆ ತೋರಿಸಲು ಹೇಳಿದರು. ಬಸಲಿಂಗ ಸರ್ಕಾರಿ ಆಸ್ಪತ್ರೆ ಎಂದರೆ ದಿಕ್ಕುದಿವಾಳಿ ಇಲ್ಲದವರು ಹೋಗುವ ಜಾಗ ಎಂದು ತಿಳಿದಿದ್ದ. ಆದರೆ ಕೊನೆಯ ಪ್ರಯತ್ನವಾಗಿ ಡಾ| ತಿಮ್ಮಪ್ಪನವರ ಬಳಿಗೆ ಹೋಗುತ್ತಾನೆ.

ಸೂಟಿಯಾದ ಬೆರಳುಗಳ ವಿಶ್ವಾಸ ತುಂಬಿದ ಡಾ| ತಿಮ್ಮಪ್ಪ ಬಸಲಿಂಗನ ದೈಹಿಕ ಸಮಸ್ಯೆಯ ಜೊತೆಗೆ ಅವನ ಇತರ ಸಮಸ್ಯೆಗಳನ್ನು ಆಲಿಸಿ ಬಸಲಿಂಗನ ದೃಷ್ಟಿಯ ಅಳತೆ ಸ್ಪಷ್ಟತೆಯನ್ನು ನೋಡಿ ನಿನ್ನ ಕಣ್ಣು ಸರಿಹೋಗುತ್ತೆ. ಆದರೆ ಆಪರೇಷನ್ ಆಗಬೇಕು ಪರವಾಗಿಲ್ಲವಾ ಎಂದರು.

ಮರುದಿನ ಆಪರೇಷನ್ ಮಾಡಿದ ತಿಮ್ಮಪ್ಪ ಮುಂಜಾಗ್ರತಾ ಕ್ರಮಗಳನ್ನು ಹೇಳಿ ಕಳುಹಿಸಿದರು. ಎರಡು ವಾರ ತಲೆಗೆ ನೀರು ಸೋಂಕಿಸಬಾರದು ನೀರು ಬಿದ್ದರೆ ಕಣ್ಣು ಕೆಟ್ಟುಹೋಗುತ್ತದೆ ಎಂದರು. ಆದರೆ ತಿಮ್ಮಪ್ಪನವರು ಹೊಲೆಯ ಜಾತಿಗೆ ಸೇರಿದವರೆಂದು ಸಿದ್ದಿಂಗಿಗೆ ಅದು ಹೇಗೋ ಗೊತ್ತಾಗಿ ದೊಡ್ಡ ರಾದ್ಧಾಂತವನ್ನೇ ಎಬ್ಬಿಸುತ್ತಾಳೆ. ಈ ವಿಷಯ ಬಸಲಿಂಗನಿಗೆ ತಿಳಿದಾಗ ಒಂದು ಕ್ಷಣ ತಿಮ್ಮಪ್ಪನವರು ತಮ್ಮ ಜಾತಿಯ ಬಗ್ಗೆ ಹೇಳಬಾರದಿತ್ತೆ ಎನ್ನುವುದಾಗಿಯೂ ಅಂದುಕೊಳ್ಳುತ್ತಾನೆ.

ಹೊಲೆಯ ಜಾತಿಯ ತಿಮ್ಮಪ್ಪ ಬಸಲಿಂಗನನ್ನು ಮುಟ್ಟಿ ಮೈಲಿಗೆಯಾದ ಕಾರಣ ಆತ ಮೈಲಿಗೆಯನ್ನು ತೊಲಗಿಸಿ ಪರಿಶುದ್ಧತೆಗಾಗಿ ಮತ್ತೆ ಕಣ್ಣನ್ನು ಬಿಟ್ಟು ತಲೆಗೆ ನೀರನ್ನು ಹೆಂಡತಿ ಸಿದ್ದಿಂಗಿ ಮೂಲಕ ಹಾಕಿಸಿಕೊಳ್ಳುತ್ತಾನೆ. ಬಸಲಿಂಗ ಮೈಲಿಗೆ, ಜಾತೀಯ ಕಾರಣಗಳಿಂದ ತಿಮ್ಮಪ್ಪ ನೀಡಿದ ಸೂಚನೆಗಳನ್ನು ಪಾಲಿಸಲು ಹಿಂಜರಿಯುತ್ತಾನೆ.

Question 4.
ಬಸಲಿಂಗನಿಗೆ ಸಿಟ್ಟು ಬರಲು ಕಾರಣವೇನು? ಅದನ್ನು ಆತ ಯಾವ ರೀತಿಯಲ್ಲಿ ವ್ಯಕ್ತಪಡಿಸುತ್ತಾನೆ?

Answer:
ಆಪರೇಷನ್ ಮಾಡಿದ ಡಾ|ತಿಮ್ಮಪ್ಪ ಹೊಲೆಯ ಜಾತಿಗೆ ಸೇರಿದವರೆಂಬುದು ಸಿದ್ದಿಂಗಿಗೆ ತಿಳಿದು ಆಕೆ ರಾದ್ಧಾಂತವನ್ನು ಎಬ್ಬಿಸುತ್ತಾಳೆ. ಈ ವಿಚಾರ ಬಸಲಿಂಗನಿಗೂ ತಿಳಿದಾಗ ಆತ ತಿಮ್ಮಪ್ಪನವರು ತಾನು ಹೊಲೆಯ ಜಾತಿಗೆ ಸೇರಿದವರೆಂದು ಒಮ್ಮೆ ಹೇಳಿದ್ದರೆ ಚೆನ್ನಾಗಿರುತಿತ್ತು ಅಂದುಕೊಂಡ. ಅನಂತರ ಇಬ್ಬರೂ ಕೂಡ ಡಾ| ತಿಮ್ಮಪ್ಪನವರಿಂದ ಚಿಕಿತ್ಸೆ ಪಡೆದ ವಿಚಾರ ಯಾರಿಗೂ ಹೇಳಬಾರದು ಎಂದುಕೊಂಡು ತಿಮ್ಮಪ್ಪನವರು ಹೇಳಿದ ಮುನ್ಸೂಚನೆಗಳನ್ನು ಸರಿಯಾಗಿ ಪಾಲಿಸದೆ ತನಗಾದ ಮೈಲಿಗೆಯನ್ನು ನೀರಿನಿಂದ ತಲೆಗೆ ನೀರು ಸೋಂಕಿಸಿಕೊಂಡು ಪರಿಶುದ್ಧಗೊಳಿಸಿಕೊಂಡ.

ಆದರೆ ನೋವು ಮತ್ತೆ ಕಾಣಿಸಿಕೊಂಡಾಗ ಬಸಲಿಂಗ ತಬ್ಬಿಬ್ಬಾದ. ತಿಮ್ಮಪ್ಪನವರನ್ನು ಬಿಟ್ಟು ಉಳಿದ ಎಲ್ಲಾ ವೈದ್ಯರುಗಳನ್ನು ಭೇಟಿ ಆದ. ಆದರೆ ಎಲ್ಲೂ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಕೊನೆಗೆ ತಿಮ್ಮಪ್ಪನವರ ಬಳಿಗೆ ಬರುವುದು ಅನಿವಾರ್ಯವಾಯಿತು. ಆದರೆ ಬಸಲಿಂಗನನ್ನು ಕಂಡ ತಿಮ್ಮಪ್ಪನವರು ಬಸಲಿಂಗನ ಸ್ಥಿತಿ ಗಮನಿಸಿ ಆತನಿಂದ ನೈಜ ವಿಚಾರ ತಿಳಿದುಕೊಳ್ಳುತ್ತಾರೆ. ನಡೆದ ಎಲ್ಲಾ ವಿಚಾರ ಬಸಲಿಂಗ ಹೇಳಿ ‘ಹೆಂಗಾದ್ರೂ ಮಾಡಿ ಇನ್ನೊಂದ್ಲಲ ಆಪರೇಷನ್ ಮಾಡಿಬಿಡ್ರಿ ನಿಮ್ಮ ಮಾತು ಮೀರೊಲ್ಲ’ ಅಂದ.ಆದರೆ ತಿಮ್ಮಪ್ಪನವರು ನಿರಾಕರಿಸಿ ಗಾಯಕ್ಕೆ ಔಷಧಿ ಕೊಟ್ಟು ಕಳುಹಿಸುತ್ತಾರೆ.ಇದರಿಂದ ಬಸಲಿಂಗ ಸಿಟ್ಟುಗೊಂಡ.

ಬಸಲಿಂಗನಿಗೆ ತಿಮ್ಮಪ್ಪ ತನ್ನ ಜಾತಿಯನ್ನು ಕೆಡಿಸಿದ್ದು ಮಾತ್ರವಲ್ಲದೆ ತನ್ನ ಬಗ್ಗೆ ನಿರ್ಲಕ್ಷ್ಯ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಅನಿಸತೊಡಗಿತು. ತನ್ನ ಕಣ್ಣು ಹೋಗಲು ಅದ್ಯಾವುದೋ ರೀತಿಯಲ್ಲಿ ಇವರು ಕಾರಣವಾದಂತೆ ತಿಳಿದು ತಾನು ಬಲ್ಲವರಲ್ಲಿ ಹೇಳಿಕೊಂಡು ತಿಮ್ಮಪ್ಪನವರನ್ನು ಟೀಕಿಸಿದ. ಅಲ್ಲದೆ ತಾನು ಹೇಳುತ್ತಿರುವುದೇ ಸತ್ಯ ಎನ್ನುವುದನ್ನು ನಂಬಿದ. ಇದನ್ನು ಅಂದರೆ ಈ ಸುಳ್ಳುಗಳೆಲ್ಲವನ್ನು ತನ್ನ ಕೌಟುಂಬಿಕ ಸಮಸ್ಯೆಯ ಪರಿಹಾರಕ್ಕೆ ದಾಳವಾಗಿ ಬಳಸಿಕೊಳ್ಳಬಹುದೆಂದು ತಿಳಿದ, ಅನ್ಯ ಡಾಕ್ಟರುಗಳು ತಿಮ್ಮಪ್ಪನವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಹಾಗೆ ಮಾಡಿದ. ಹೀಗೆ ತಿಮ್ಮಪ್ಪನವರ ಬಗೆಗಿನ ಅಸಮಾಧಾನವನ್ನು ಬಸಲಿಂಗ ಈ ರೀತಿಯಾಗಿ ತೀರಿಸಿಕೊಂಡ.

Question 5.
ಬಸಲಿಂಗ ಕೊನೆಯಲ್ಲಿ ತೆಗೆದುಕೊಂಡ ನಿರ್ಧಾರ ಯಾವುದು? ಅದಕ್ಕೆ ಕಾರಣಗಳೇನು?

Answer:
ಬಸಲಿಂಗ ಕೊನೆಗೂ ತಿಮ್ಮಪ್ಪನವರನ್ನೇ ಕಾಣುವ ನಿರ್ಧಾರ ಮಾಡಿದ ಬಸಲಿಂಗ ಡಾ|ತಿಮ್ಮಪ್ಪನವರ ಬಗ್ಗೆ ತನ್ನ ಜಾತಿಯನ್ನು ಕೆಡಿಸಿಕೊಳ್ಳಲು ಇವರೇ ಕಾರಣ ಎಂದು ತೀರ್ಮಾನಿಸಿ ಸಿಟ್ಟು ಮಾಡಿಕೊಂಡು ಅವರ ವಿರುದ್ಧ ಇತರರು ಕೆಟ್ಟ ಮಾತುಗಳನ್ನು ಮಾತನಾಡುವ ಹಾಗೆ ಮಾಡಿದೆ. ಹಾಗೆ ತನ್ನ ಉಡಾಫೆತನವನ್ನು ಇನ್ನಷ್ಟು ಹೆಚ್ಚಿಸಿಕೊಂಡು ಅದನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮುಂದಾದ.

ಅಲ್ಲದೆ ಅನ್ಯ ಡಾಕ್ಟರುಗಳು ಕೂಡ ಡಾ| ತಿಮ್ಮಪ್ಪನಿಗೆ ಬುದ್ದಿ ಇಲ್ಲ. ಅದಕ್ಕೆ ಅಪರೇಷನ್ ಮಾಡಿದ್ದಾರೆಎಂದು ಹೇಳುವ ಹಾಗೆ ಮಾಡಿದ. ಆದರೆ ಯಾರೂ ಕೂಡ ಬಸಲಿಂಗನಿಗೆ ಬೇಕಾದ ಸರಿಯಾದ ಔಷಧ ನೀಡಲಿಲ್ಲ. ಕೊನೆಗೆ ತಿಮ್ಮಪ್ಪನವರ ಬಳಿಗೆ ಹೋದಾಗ ಅವರು ಬಸಲಿಂಗನ ಪರಿಸ್ಥಿತಿಯನ್ನು ಗಮನಿಸಿ ನಾನು ನಿನ್ನನ್ನು ಮುಟ್ಟಿದ್ದು ಕೇವಲ ಡಾಕ್ಟರಾಗಿ ಈ ಮುಟ್ಟುವಿಕೆ ನಾನು ಊಹಿಸದೇ ಇದ್ದದ್ದನ್ನು ಮಾಡಿದೆ. ಎನ್ನುತ್ತಾ ಆತನನ್ನು ಡಾ|ಚಂದ್ರಪ್ಪನ ಬಳಿಗೆ ಕಳುಹಿಸಿಕೊಡುತ್ತಾರೆ.

ಆದರೆ ಡಾ| ಚಂದ್ರಪ್ಪನವರು ಬಸಲಿಂಗನ ಪೂರ್ಣ ಕತೆಯನ್ನು ತಿಳಿದು ‘ಡಾ| ತಿಮ್ಮಪ್ಪನವರಿಂದ ಆಗದ ಕೆಲಸ ನನ್ನಂಥವರಿಂದ ಸಾಧ್ಯವಿಲ್ಲ. ಅವರು ನಮ್ಮ ವೈದ್ಯ ಲೋಕಬಲ್ಲ ಅತ್ಯಂತ ಪ್ರಾಮಾಣಿಕ, ಪ್ರತಿಭಾವಂತ ಡಾಕ್ಟರು. ನೀನು ಅವರನ್ನು ನೋಡಿದರೆ ಮಾತ್ರ ಇರುವ ಒಂದು ಕಣ್ಣು ಉಳಿಯುತ್ತೆ’ ಎಂಬುದಾಗಿ ಹೇಳಿ ಪುನಃ ತಿಮ್ಮಪ್ಪನ ಬಳಿಗೆ ಕಳುಹಿಸುತ್ತಾರೆ. ಆಗ ಬಸಲಿಂಗನಿಗೆ ತನ್ನ ತಪ್ಪಿನ ಅರಿವು ಆಗುತ್ತದೆ. ಆತನಿಗೆ ಕೊನೆಯಲ್ಲಿ ತನ್ನ ಸುಳ್ಳು, ಉಡಾಫೆ, ಜಾತಿ, ಮಠದ ಗುರು ಯಾರೂ ತನ್ನ ಕಣ್ಣು ಉಳಿಸುವುದಿಲ್ಲ ಎಂಬುದು ನಿಶ್ಚಿತವಾಗತೊಡಗುತ್ತದೆ. ಕೊನೆಗೆ ಆತ ಬೇರೆ ಕೆಟ್ಟ ಆಲೋಚನೆ ಮಾಡದೆ ತಿಮ್ಮಪ್ಪನವರ ಬಳಿಗೆ ಹೋಗಿ ತನ್ನ ತಪ್ಪಿಗೆ ಕ್ಷಮೆ ಕೇಳಿ ಚಿಕಿತ್ಸೆ ಪಡೆದುಕೊಳ್ಳುತ್ತಾನೆ.

ಲೇಖಕರ ಪರಿಚಯ 

2nd PUC Kannada Chapter 13 Muttisikondavanu
2nd PUC Kannada Chapter 13 Muttisikondavanu

ಪಿ. ಲಂಕೇಶ್ (೧೯೩೫-೨೦೦೦) : ನವ್ಯಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಪಿ. ಲಂಕೇಶ್ ಕನ್ನಡ ಕಥಾಸಾಹಿತ್ಯಕ್ಕೆ ಹೊಸ ಆಯಾಮ ನೀಡಿದವರು. ಹುಟ್ಟೂರು ಶಿವಮೊಗ್ಗ ಸಮೀಪದ ಕೊನಗವಳ್ಳಿ ಗ್ರಾಮ. ಹಲವು ವರ್ಷಗಳ ಕಾಲ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ. ಆನಂತರ ಆ ವೃತ್ತಿ ಯನ್ನು ತ್ಯಜಿಸಿ ತಮ್ಮ ಹೆಸರಿನಲ್ಲಿ ‘ಲಂಕೇಶ್ ಪತ್ರಿಕೆ’ ಎಂಬ ವಾರಪತ್ರಿಕೆಯನ್ನು ಆರಂಭಿಸಿ ಕನ್ನಡ ನಾಡಿನ ಜಾಣ-ಜಾಣೆಯರ ಮನಸ್ಸಿಗೆ ಲಗ್ಗೆಯಿಟ್ಟವರು.

ಲಂಕೇಶ್ ಬರೆದ ಕೃತಿಗಳು ಹಲವಾರು. ಕೆರೆಯ ನೀರನು ಕೆರೆಗೆ ಚೆಲ್ಲಿ, ನಾನಲ್ಲ, ಉಮಾಪತಿಯ ಸ್ಕಾಲರ್‌ಶಿಪ್ ಯಾತ್ರೆ, ಕಲ್ಲುಕರಗುವ ಸಮಯ ಮತ್ತು ಇತರ ಕತೆಗಳು, ಉಲ್ಲಂಘನೆ, ಮಂಜು ಕವಿದ ಸಂಜೆ ಮೊದಲಾದ ಕಥಾಸಂಕಲನಗಳನ್ನು, ಬಿರುಕು, ಮುಸ್ಸಂಜೆಯ ಕಥಾಪ್ರಸಂಗ, ಅಕ್ಕ ಮೊದಲಾದ ಕಾದಂಬರಿಗಳನ್ನು,

ತಲೆಮಾರು, ಬಿಚ್ಚು ಮೊದಲಾದ ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ನಾಟಕ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸಮಾಡಿದ ಲಂಕೇಶ್ ಅವರ ಟಿ. ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ತೆರೆಗಳು, ಸಂಕ್ರಾಂತಿ, ಗುಣಮುಖ ಮೊದಲಾದ ನಾಟಕಗಳು ರಂಗಾಸಕ್ತರ ಗಮನಸೆಳೆದಿವೆ. ಹುಳಿಮಾವಿನ ಮರ ಇವರ ಆತ್ಮಕಥನ.

ಪಾಪದ ಹೂವುಗಳು, ದೊರೆ ಈಡಿಪಸ್ ಮತ್ತು ಅಂತಿಗೊನೆ ಅನುವಾದ ಕೃತಿಗಳು. ಪ್ರಸ್ತುತ, ಕಂಡದ್ದು ಕಂಡಹಾಗೆ ಇವರ ವಿಮರ್ಶಾ ಕೃತಿಗಳು. ‘ಅಕ್ಷರ ಹೊಸ ಕಾವ್ಯ’ ಇವರು ಸಂಗ್ರಹಿಸಿ ಸಂಪಾದಿಸಿದ ವಿಶಿಷ್ಟ ಕಾವ್ಯಸಂಗ್ರಹ, ಲಂಕೇಶ್ ಪತ್ರಿಕೆಯಲ್ಲಿ ಇವರು ಬರೆದ ಟೀಕೆ ಟಿಪ್ಪಣಿ. ಮರೆಯುವ ಮುನ್ನ ಅಂಕಣಗಳು ಪುಸ್ತಕ

ರೂಪದಲ್ಲಿ ಪ್ರಕಟವಾಗಿವೆ. ‘ಪಲ್ಲವಿ’, ‘ಅನುರೂಪ’, ‘ಎಲ್ಲಿಂದಲೋ ಬಂದವರು’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ ಲಂಕೇಶ್ ‘ಪಲ್ಲವಿ’ ಚಿತ್ರ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ೧೯೯೩ರಲ್ಲಿ ಲಂಕೇಶ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

‘ಮುಟ್ಟಿಸಿಕೊಂಡವನು’ ಲಂಕೇಶ್ ಅವರು ಬರೆದ ವಿಶಿಷ್ಟ ಕತೆಗಳಲ್ಲೊಂದು. ವ್ಯಕ್ತಿಯ ಮುಗ್ಧತೆ, ಸಣ್ಣತನ ಮತ್ತು ಆತನೊಳಗೆ ಹುದುಗಿರುವ ಜಾತಿಪ್ರಜ್ಞೆ – ಇವು ಉಂಟುಮಾಡುವ ನೋವು, ತಳಮಳ, ಸಮಸ್ಯೆಗಳನ್ನುತಣ್ಣನೆಯ ಶೈಲಿಯಲ್ಲಿ ಈ ಕತೆ ನಿರೂಪಿಸುತ್ತದೆ. ವ್ಯಕ್ತಿಯ ಜಾತಿಪ್ರಜ್ಞೆ ಹುಟ್ಟುಹಾಕುವ ಸಮಸ್ಯೆ ಮತ್ತು ಈ ಅವಮಾನಗಳನ್ನು ಮಾನವೀಯ ನೆಲೆಯಲ್ಲಿ ಎದುರಿಸುವ ವೈದ್ಯನ ಪ್ರಾಮಾಣಿಕತೆ ಈ ಎರಡರ ವೈರುಧ್ಯದಲ್ಲಿಯೇ ಕತೆಯ ತೀವ್ರತೆ ಇದೆ. ಶಿವರಾಮಕಾರಂತರ ‘ಚೋಮನದುಡಿ’ ಕಾದಂಬರಿಯ ನಂತರ ದಲಿತ ಸಂವೇದನೆಯನ್ನು ದಲಿತೇತರನೊಬ್ಬ ವಿಶಿಷ್ಟವಾಗಿ ನೋಡುವ ಸಂದರ್ಭ ಈ ಕತೆಯಲ್ಲಿದೆ.

Click Here to Download Muttisikondavanu PDF Notes
Click Here to Watch Muttisikondavanu Video

You cannot copy content of this page